Friday, March 21, 2008

ಶ್ರೀರಾಘವೇಂದ್ರ ತೀರ್ಥಾವಲೋಕನ - ಭಾಗ ೧

ಪೀಠಿಕೆ
:೧) ಹುಟ್ಟು-ಸಾವುಗಳ ಮಧ್ಯದ ಜೀವಿ ಬದುಕು ಸುಸಂಸ್ಕೃತವಾಗಿ ಸಮೃದ್ಧಧವಾಗಿರಬೇಕು. ಜೀವನದ ಪ್ರತಿಕ್ಷಣ ಸುಸಂಸ್ಕೃತವಾದರೆ, ಜೀವನವೇ ಒಂದು ಯಜ್ಞಮಯವಾಗುವುದು. ಅದಕ್ಕಾಗಿ ಬದುಕು ಉನ್ನತ ಮೌಲ್ಯಗಳ ಮೇಲೆ ಆಧಾರವಾಗಿರಬೇಕು. ಹಾಗಿಲ್ಲದಿದ್ದರೆ ಅದೇ ಬದುಕಿನಲ್ಲಿ ದುಷ್ಟಪರಿಣಾಮ ಉಂಟಾಗಿ ಅಧಃ ಪತನವಾಗುವುದು. "ವೇದ ಏವ ದ್ವಿಜಾತೀನಾಂ ನಿಶ್ರೇಯಸ್ಕರಃ ಪರಃ" ಎಂಬಂತೆ ವೇದೋಕ್ತ ಧರ್ಮ ಕರ್ಮಾಚರಣೆಗಳು ಮುಖ್ಯ ತಳಹದಿಯಾಗಬೇಕು. ಈ ವಿಧ ವಿಹಿತ ವೇದೋಕ್ತ ವರ್ಣಾಶ್ರಮ ಸರ್ವಕಾರ್ಯಗಳೂ ಜೀವಿಯ ಆಧ್ಯಾತ್ಮ ಸಿದ್ಧಿಗೆ ಕಾರಣವಾಗುತ್ತದೆ. "ವೇದಶಾಸ್ತ್ರಾತ್ಪರಂ ನಾಸ್ತಿ ನ ದೇವೋ ಕೇಶವಾತ್ಪರಃ " ಜಗತ್ತಿಗೆ ಹಿತವನ್ನು ಬೋಧಿಸುವ ವಿಷಯದಲ್ಲಿ ವೇದಶಾಸ್ತ್ರಗಳಿಗಿಂತಲೂ ಉತ್ಕೃಷ್ಟವಾದವು ಬೇರೆ ಇಲ್ಲ. ಚರಾಚರಾತ್ಮಕವಾದ ಜಗತ್ತಿನ ಎಲ್ಲ ಕಾಲಗಳ - ಎಲ್ಲ ವಿಚಾರಗಳನ್ನೂ ಸ್ಫುಟವಾಗಿ ನಿರೂಪಿಸುತ್ತವೆ. ಈ ಭಾವದಿಂದಲೇ ಮನುಗಳು "ಭೂತಂ ಭವ್ಯಂ ಭವಿಷ್ಯಂ ಚ ಸರ್ವಂ ವೇದಾತ್ಪ್ರಸಿದ್ಧ್ಯತಿ" ಎಂದಿದ್ದಾರೆ. ೨) ಮತ, ಪಂಥ, ಧರ್ಮ ಇತ್ಯಾದಿಗಳು ಬಹು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿ ಬಂದಂಥವುಗಳು. ಕಾಲಕಾಲಕ್ಕೆ ಅವುಗಳಾ ಬಗ್ಗೆ ಅರ್ಥವ್ಯತ್ಯಾಸಗಳು ಕಂಡುಬಂದು, ಧರ್ಮವನ್ನು ಮತವೆಂತಲೂ, ಮತವನ್ನು ಧರ್ಮವೆಂತಲೂ ಹೇಳುವ ಪರಿಪಾಠ ನಮ್ಮಲ್ಲಿ ಬಂದಿದೆ. ಆದರೆ ವಿಚಾರವಂತರಿಗೆ ಧರ್ಮವೆಂಬುದು ಸಾರ್ವಕಾಲಿಕ ನಿತ್ಯಸತ್ಯದ ವ್ಯವಸ್ಥೆ ಎಂದು ಕಂಡುಬರುತ್ತದೆ. ವೇದಗಳಾದರೋ ಈ ಜಗತ್ತಿನ ಸೃಷ್ಟಿಕರ್ತನಾದ ಪರಬ್ರಹ್ಮನನ್ನು ಧರ್ಮನೆಂದೇ ಕರೆಯುತ್ತದೆ. ಜಗತ್ತಿನ ವ್ಯವಸ್ಥಿತ ಕ್ರಮವನ್ನು ಮಾಡುವುದರಿಂದಲೂ ಅವನು ಧರ್ಮನೆನಿಸುವನು. ಅದೇ ಜಗತ್ತಿನ ಪ್ರತಿಷ್ಠೆಗೆ ಕಾರಣ. ಇದನ್ನೇ ವೇದವು "ಧರ್ಮೋ ಹಿ ಜಗತಃ ಪ್ರತಿಷ್ಠಾ" ಎಂದಿದೆ. ಧರ್ಮವು ಸಕಲಕ್ಕೂ ಆಧಾರವಾಗಿದೆ. "ಸರ್ವಂ ಧರ್ಮೇ ಪ್ರತಿಷ್ಟಿತಂ" ಹಾಗೂ "ವೇದಾದ್ಧರ್ಮೋ ಹಿ ನಿರ್ಬಭೌ" ಈ ಧರ್ಮವೂ ವೇದದಿಂದಲೇ ಆವಿರ್ಭವಿಸಿರುವುದು. "ಧರ್ಮ ಜಿಜ್ಞಾಸಮಾನಾನಾಂ ಪ್ರಮಾಣಂ ಪರಮಂ ಶ್ರುತಿಃ" ಈ ಧರ್ಮ ಸ್ವರೂಪವನ್ನು ಸೂಕ್ಷ್ಮವಾಗಿ ತಿಳಿಯಲೂ ಸಹ ವೇದವೇ ಆಧಾರವಾಗಿದೆ. ಹೀಗಿದ್ದರೂ ಸಾಮಾನ್ಯವಾಗಿ ಲೋಕದಲ್ಲಿ ಆಚಾರ-ವಿಚಾರ-ವ್ಯವಹಾರ-ಪ್ರಾಯಶ್ಚಿತ್ತ ಎಂಬ ವಿಧಾನಗಳಲ್ಲಿ ಈ ಧರ್ಮವು ರೂಪಗೊಂಡು, ಧರ್ಮಶಾಸ್ತ್ರಗ್ರಂಥಗಳಲ್ಲಿ ಸ್ಮೃತಿರೂಪಾಗಿ ಕಂಡು ಬರುವುದು. ಆಚಾರವು ವೈಯುಕ್ತಿಕವಾದದ್ದು. ವ್ಯವಹಾರವು ಸಾಮಾಜಿಕವಾದದ್ದು. ವಿಚಾರವು ನಿತ್ಯಸತ್ಯವಾದ ಧರ್ಮ. ಇವುಗಳ ಕರ್ತವ್ಯದಲ್ಲಿ ಲೋಪ ಬಂದರೆ ಪ್ರಾಯಶ್ಚಿತ್ತವೆಂಬುದು ಉಕ್ತವಾಗಿದೆ. ಆದರೆ ಆಚಾರಕ್ಕೆ ಹಿನ್ನೆಲೆಯಾಗಿ ಯಾವಾಗಲೂ ಒಂದು ವಿಚಾರವಿರುವುದು. ಈ ವಿಚಾರಗಳ ಹಿನ್ನೆಲೆಯೇ ಶೃತಿಗಳು. ಶ್ರುತಿ-ಸ್ಮೃತಿ-ಸದಾಚಾರ-ಪ್ರಾಯಶ್ಚಿತ್ತಾದಿ ವಿಚಾರಸರಣಿಯಲ್ಲಿ ಬೆಳೆದು ಬಂದ ನಿತ್ಯಸತ್ಯವಾದ ಧರ್ಮಗಳೇ ವೈದಿಕಧರ್ಮಗಳೆನಿಸಿವೆ. ಈ ವಿಧ ಸರಣಿ ಇಲ್ಲದ ಧರ್ಮಗಳು ಅವೈದಿಕ ಧರ್ಮಗಳು.

This is an article written by Ma.Sha.Sam. Sri Pushkaraprasadacharya and posted by Mantralayam blog
Courtesy - Mantralayam blog

No comments: